News

ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣೆಯಿಲ್ಲದಂತಾಗಿದ್ದು!

ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣೆಯಿಲ್ಲದಂತಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಶಕ್ತಿ ಬಣ ಗುರುವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಡಿಸಿಗೆ ಮನವಿ ಸಲ್ಲಿಸಿತು.

ಜಿಲ್ಲಾಧ್ಯಕ್ಷ ಆರ್.ವಿಜಯಕುಮಾರ ಮಾತನಾಡಿ, ಜಿಂದಾಲ್ ಕಂಪನಿಯ ಕೋಕ್ ಪ್ಲ್ಯಾಂಟ್‌ನಲ್ಲಿ ಡಂಪಿಂಗ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಳ್ಳಾರಿ ನಗರದ ದುರ್ಗಣ್ಣ ಎಂಬ ಕಾರ್ಮಿಕ ಏಕಾಏಕಿ ಕಾರ್ಖಾನೆಯಲ್ಲಿ ಕಾಣೆಯಾಗಿದ್ದ. ಸುರಕ್ಷಾ ಕವಚಗಳಿಲ್ಲದೇ ಇರುವುದರಿಂದ ಕಾರ್ಮಿಕ ಕೋಕ್ ಪ್ಲ್ಯಾಂಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ತನಿಖೆಯ ನಂತರ ತಿಳಿದು ಬಂದಿದೆ. ಈ ರೀತಿ ಹಲವು ಕಾರ್ಮಿಕರು 15ದಿನಕ್ಕೊಬ್ಬರಂತೆ ಕಾರ್ಖಾನೆಯಲ್ಲಿ ಮೃತಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕಾರ್ಮಿಕ ವರ್ಗಕ್ಕೆ ಜಿಂದಾಲ್ನಲ್ಲಿ ರಕ್ಷಣೆ ಒದಗಿಸಬೇಕು. ಎಲ್ಲ ಕಾರ್ಮಿಕರಿಗೆ ಕೆಲಸದ ವೇಳೆ ಸುರಕ್ಷಾ ಕವಚಗಳನ್ನು ವಿತರಿಸಬೇಕು. ಇದುವರೆಗೂ ಮೃತಪಟ್ಟ ಕಾರ್ಮಿಕ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು. ಯುವ ಘಟಕದ ಅಧ್ಯಕ್ಷ ಪರಮೇಶ್ವರ, ಕೂಲಿ ಕಾರ್ಮಿಕ ಘಟಕದ ಅಧ್ಯಕ್ಷ ರುದ್ರೇಶ, ಪದಾಧಿಕಾರಿಗಳಾದ ರಾಮಾಂಜನೇಯ, ಹೊನ್ನಪ್ಪ, ಕನಕಪ್ಪ, ಪರಶುರಾಮ, ಲಕ್ಷ್ಮ್ಮಣ ನಾಯಕ, ರಾಮಬಾಬು, ಬಸಪ್ಪ ಸೇರಿ ಮತ್ತಿತರರು ಇದ್ದರು.