News

ಕನ್ನಡ ವಿವಿಯಲ್ಲಿ ಕಲಾ ಗ್ಯಾಲರಿ, ವಸ್ತು ಸಂಗ್ರಹಾಲಯ ಉದ್ಘಾಟನೆ

ಹೊಸಪೇಟೆ: ಆಧುನಿಕ ಜೀವನದ ಒತ್ತಡಗಳಿಂದ ಪಾರಾಗಲು ಸಂಗೀತ, ಚಿತ್ರಕಲೆ ಹಾಗೂ ಶಿಲ್ಪಕಲಾಕೃತಿ ನೆರವಾಗುತ್ತವೆ ಎಂದು ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಕಲಾಗ್ಯಾಲರಿ, ವಸ್ತು ಸಂಗ್ರಹಾಲಯ ಮತ್ತು ಡಿಜಿಟಲ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು. ಕಲಾಕೃತಿಗಳು ಶಾಂತಿ, ನೆಮ್ಮದಿ, ಆರೋಗ್ಯ ಸದೃಢತೆಗೆ ನೆರವಾಗುತ್ತವೆ. ವಿಶ್ವವಿದ್ಯಾಲಯ ಸಾಂಸ್ಕೃತಿಕ ದತ್ತು ಗ್ರಾಮಗಳ ಯೋಜನೆ ಅಡಿ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕ ಸ್ಥಳಗಳ ಗೋಡೆ ಮೇಲೆ ಸ್ವಚ್ಛತೆ, ಆರೋಗ್ಯ, ಕಲೆ ಮತ್ತು ಸಂಸ್ಕೃತಿಯ ಮಹತ್ವ ಪರಿಚಯಿಸುವುದರ ಜತೆಗೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುವ ಚಿತ್ರಕಲೆ, ಕಲಾಕೃತಿ ರಚಿಸುತ್ತಿದ್ದಾರೆ ಎಂದರು.

ಲಿತಕಲೆಗಳ ನಿಕಾಯದ ಡೀನ್ ಡಾ.ಕೆ. ರವೀಂದ್ರನಾಥ ಮಾತನಾಡಿ, ಸಂಶೋಧಕ ಕಾರ್ಯ ಕ್ಷೇತ್ರದಲ್ಲಿ ಸದಾಸೌಂದರ್ಯ ಪ್ರಜ್ಞೆ ಹಾಗೂ ಪ್ರಯೋಜನ ಪ್ರಜ್ಞೆ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಲೆ ಕೇಂದ್ರಿಯ ಆಕರ ಕೋಶವಾಗಿ ಗೋಚರಿಸಿದರೆ, ಅವು ಮುಂದಿನ ಪೀಳಿಗೆಗೆ ನೆರವಾಗಲಿವೆ ಎಂದರು.

ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ ಮಾತನಾಡಿ, ಕನ್ನಡ ವಿವಿಯ ಮೂಲ ಆಶಯ ಸಂಶೋಧನೆಯಾಗಿದ್ದು, ಈ ನಿಟ್ಟಿನಲ್ಲಿ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು ಸಂಶೋಧನೆಗೆ ಪೂರಕವಾಗಿ ಚಿತ್ರಕಲಾಕೃತಿಗಳನ್ನು ರಚಿಸಬೇಕು ಎಂದರು. ಕನ್ನಡ ವಿವಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ.ಎಚ್.ಎನ್.ಕೃಷ್ಣೇಗೌಡ, ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ.ಮೋಹನರಾವ್ ಬಿ.ಪಂಚಾಳ ಇತರರಿದ್ದರು.