News

ಅಯ್ಯಪ್ಪ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಸಂತರ್ಪಣೆ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಮರು ಊಟ ಬಡಿಸುವ ಮೂಲಕ ಸಾಮರಸ್ಯ ಸಾರಿದರು.

ದೇವಸ್ಥಾನದಲ್ಲಿ ಬೆಳಗ್ಗೆ ಅಯ್ಯಪ್ಪಸ್ವಾಮಿ ಪೂಜೆ ನಂತರ ಮುನ್ನೂರಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಆಗಮಿಸಿ ಮುಸ್ಲಿಮರಿಂದ ಪ್ರಸಾದ ಸ್ವೀಕರಿಸಿದರು. ಮುಸ್ಲಿಂ ಧರ್ಮಗುರು ಸೈಯದ್ ದಾದಾಪೀರ್ ಸಾಹೇಬ್ ಜಾನವಿ ಮಾತನಾಡಿ, ಹಿಂದು-ಮುಸ್ಲಿಮರೆಲ್ಲರೂ ಒಂದೇ, ನಮ್ಮಲ್ಲಿ ಯಾವುದೇ ಭೇದ-ಭಾವಗಳಿಲ್ಲ. ಸಮನ್ವಯತೆಯಿಂದ ಎಲ್ಲರೂ ಕೂಡಿ ಬಾಳೋಣ. ಹೀಗಾಗಿಯೇ ಪ್ರತಿ ವರ್ಷ ಅಯ್ಯಪ್ಪ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದೇವೆ ಎಂದರು.

ವಕ್ಫ್ ಬೋರ್ಡ್ ಸದಸ್ಯ ನೂರ್‌ಬಾಷಾ, ಮುಖಂಡರಾದ ನೂರ್ ಅಹಮ್ಮದ್, ರಿಜ್ವಾನ್, ಸೈಪ್ ಉಲ್ಲಾಸ್, ಜಾವೀದ್ ಸಾಬ್, ರಸೂಲ್ ಸಾಬ್ ಸೇರಿ ಇತರರು, ಅಯ್ಯಪ್ಪ ಮಾಲಾಧಾರಿಗಳಿಗೆ ಊಟ ಬಡಿಸಿದ ನಂತರ ಪ್ರಸಾದ ಸ್ವೀಕರಿಸಿದರು. ಪಾಲಿಕೆ ಸದಸ್ಯ, ಅಯ್ಯಪ್ಪ ಮಾಲಾಧಾರಿ ಎಂ.ಗೋವಿಂದರಾಜುಲು ಇತರರಿದ್ದರು.